ಭೂಶಿಲ್ಪ
	ಭೂಮಿಯ ಮೇಲೆ ಕಂಡುಬರುವ ಚಿತ್ರವಿಚಿತ್ರ ರೂಪಣೆ. ಬೆಟ್ಟಸಾಲು, ಕಣಿವೆ, ಕಂದರ, ನದಿ, ಸರೋವರ, ವಿಶಾಲ ಬಯಲು ಮೊದಲಾದವು ರೂಪುಗೊಂಡ ಬಗೆ, ಅವುಗಳ ಭವಿಷ್ಯಸ್ಥಿತಿ ಮುಂತಾದವನ್ನು ಕುರಿತ ವೈe್ಞÁನಿಕ ವಿವೇಚನೆ (ಅರ್ತ್‍ಸ್ಕಲ್‍ಪ್ಚರ್). ಭೂಮಿಯ ಮೇಲಿನ ಇಂಥ ರೂಪಣಿಗಳಿಗೂ ಅವುಗಳ ವ್ಯತ್ಯಾಸಗಳಿಗೂ ಕಾರಣ ಭೂಮಿಯಲ್ಲಿಯ ಶಕ್ತಿಗಳು. ಬೀಸುವ ಗಾಳಿ, ಸುರಿವ ಮಳೆ, ಹರಿವ ನೀರು, ಅಪ್ಪಳಿಸುವ ಸಮುದ್ರದ ಅಲೆ, ಗೆಡ್ಡೆಕಟ್ಟಿರುವ ಹಿಮ ಇವೆಲ್ಲ ಭೂಮಿಯ ಮೇಲೆ ಗೋಚರಿಸುವ ಬಹಿರ್ಜನಿತ ಶಕ್ತಿಗಳು. ಇವುಗಳ ಪರಿಣಾಮವಾಗಿ ಭೂಭಾಗ ಕ್ಷಯಿಸುತ್ತ ನಿರಂತರ ತಿದ್ದುಪಡಿಗೆ ಒಳಗಾಗುತ್ತಲೇ ಇರುತ್ತದೆ. ಅಂದರೆ ಶಿಲ್ಪಕಾರ್ಯ ಮುಂದುವರಿಯುತ್ತಲೇ ಇರುತ್ತದೆ. ಇದರ ಪ್ರಕಟಿತರೂಪವೇ ಭೂಮಿಯ ಮೇಲಿನ ವಿವಿಧ 
ರೂಪಗಳು.

	ಬಹಿರ್ಜನಿತ ಶಕ್ತಿಗಳು ಮಾತ್ರವಲ್ಲದೆ ಭೂಮಿಯ ಒಳಭಾಗದ ಅಂತರಾಳದಲ್ಲಿ ಜನಿಸುವ ಬೇರೆ ಬಗೆಯ ಅಂತರ್ಜನಿತ ಶಕ್ತಿಗಳೂ ಇರುತ್ತವೆ. ಇದಕ್ಕೆ ಭೂಗರ್ಭದಲ್ಲಿಯ ಉಷ್ಣ ಕಾರಣ. ನೆಲ ಆಳಕ್ಕೆ ಇಳಿದಂತೆಲ್ಲ ಉಷ್ಣತೆ ಹೆಚ್ಚುತ್ತ ಹೋಗುತ್ತದೆ. ಕೆಲವೇ ಮೀಟರುಗಳ ಕೆಳಗೆ ಹೋದರೆ ಸಾಕು, ಅಲ್ಲಿಯ ಶಿಲೆಗಳೆಲ್ಲ ಕಾದು ಕೆಂಪಗಾಗಿರುವುದು ಕಂಡುಬರುತ್ತದೆ. ಮತ್ತಷ್ಟು ಕೆಳಕ್ಕೆ ಇಳಿದರೆ ಅವು ಕರಗಿಹೋಗಿ ಶಿಲಾಪಾಕವಾಗಿರುವ ಸ್ಥಿತಿ ಇರುತ್ತದೆ. ಭೂಭಾಗಗಳ ಕೆಲವೆಡೆ ಇರಬಹುದಾದ ಬಿರುಕುಗಳ ಮೂಲಕ ಶಿಲಾಪಾಕ ಮೇಲೆ ಉಕ್ಕಿ ಹರಿದು ಬರುವುದುಂಟು. ಈ ವಿದ್ಯಮಾನಕ್ಕೆ ಜ್ವಾಲಾಮುಖಿ ಎಂದು ಹೆಸರು. ಶಿಲಾಪಾಕ ಹೊರಗೆ ಬರುವಾಗ, ಭೂಮಿಯೊಳಗಿನ ಶಿಲಾಸ್ತರಗಳ ಜೋಡಣೆಯಲ್ಲಿ ಏರುಪೇರು ಉಂಟಾಗಿ ಭೂಮಿ ಕಂಪಿಸುತ್ತದೆ. ಕಂಪನದ ಸಲುವಾಗಿ ಭೂಮಿ ಬಿರುಕುಬಿಟ್ಟು ಗುಡ್ಡಗಳು ಜರಿಯುವುದು, ನದಿಗಳು ಬತ್ತಿಹೋಗುವುದು, ಕಟ್ಟಡಗಳು ಕುಸಿಯುವುದು ಮುಂತಾದ ಹಾನಿಕಾರಕ ಪರಿಣಾಮಗಳು ಉಂಟಾಗುತ್ತವೆ. ಭೂಮಿಯ ಮೇಲಿನ ಎಲ್ಲ ಪ್ರಕೃತಿರೂಪಗಳೂ ಬಹಿರ್ಜನಿತ ಮತ್ತು ಅಂತರ್ಜನಿತ ಶಕ್ತಿಗಳ ಪ್ರಭಾವಕ್ಕೆ ಒಳಪಟ್ಟೇ ವ್ಯತ್ಯಾಸಗೊಳ್ಳುತ್ತ ಹೋಗುತ್ತವೆ.

	ಎದ್ದು ನಿಂತಿರುವ ಯಾವ ಶಿಲಾವಸ್ತುವೇ ಆಗಲಿ, ಅದು ಎಷ್ಟೇ ಗಡಸು ಆದದ್ದಾಗಲಿ ಭೂಶಕ್ತಿಗಳಿಗೆ ಒಳಪಟ್ಟು ಕಾಲಕ್ರಮೇಣ ನೆಲಸಮವಾಗಲೇಬೇಕು ಎನ್ನುವುದು ಪ್ರಕೃತಿ ನಿಯಮ. ಉದಾಹರಣೆಗೆ ಒಂದು ಸ್ಥಳದಲ್ಲಿಯ ನೆಲ ಕ್ಷಯಿಸುತ್ತದೆ ಎನ್ನೋಣ. ಹೀಗೆ ಕ್ಷಯಿಸಿದ ವಸ್ತುವೆಲ್ಲ ಬಲುದೂರ ಸಾಗಿ ಸಮುದ್ರದ ತಳದಲ್ಲಿ ಶೇಖರಗೊಂಡು ಅಲ್ಲಿ ಬೆಳೆಯಲು ಪ್ರಾರಂಭಿಸುತ್ತದೆ. ಈ ಪ್ರಕೃತಿ ಕಾರ್ಯ ನಿರಂತರವಾಗಿ ಸಾಗುವಂಥದು. ಒಬ್ಬ ಮನುಷ್ಯನ ಜೀವನದಲ್ಲಿ ಹೇಗೊ ಹಾಗೆ ಭೂಮಿಯ ಬಾಹ್ಯ ಪ್ರಕೃತಿಯಲ್ಲಿಯ ವಿವಿಧ ರೂಪಗಳಲ್ಲೂ ಬೇರೆ ಬೇರೆ ಅವಸ್ಥೆಗಳನ್ನು ಗುರುತಿಸಬಹುದು. ಪಂಕ್ತಿ ಪಂಕ್ತಿಯಾಗಿ ಹಬ್ಬಿರುವ ಪರ್ವತಗಳು ಕಾಲಕ್ರಮೇಣ ತಮ್ಮ ಸ್ಥಿರತೆಯನ್ನೂ ಗಡಸುತನವನ್ನೂ ಕಳೆದುಕೊಳ್ಳುತ್ತವೆ. ಪರ್ವತ ಶಿಖರಗಳೆಲ್ಲ ಕೆಳಗುರುಳಿ ಅವುಗಳ ಕೊಂಕುಗಳೆಲ್ಲ ಸವೆದು, ಎದ್ದುನಿಂತ ಭೂಭಾಗವೆಲ್ಲ ಕುಗ್ಗಿ, ನಡುವಯಸ್ಸು ತಲಪಿರುವುದು ಕಾಣಬರುತ್ತದೆ. ಈ ಸ್ಥಿತಿಯಿಂದ ಮತ್ತೆ ಮುಂದೆ ಅವಲೋಕಿಸಿದಲ್ಲಿ ಭೂಮಿಯಲ್ಲಿಯ ಏರುತಗ್ಗುಗಳೆಲ್ಲವೂ ಮಾಯವಾಗಿ, ಯಾವುದೇ ನಿರ್ದಿಷ್ಟ ರೂಪವೂ ಇರದ ಬಟ್ಟನೆಯ ಬಯಲುಗಳು ಕಾಣುತ್ತವೆ. ಈ ಸ್ಥಿತಿಯನ್ನು ಪ್ರಕೃತಿಯ ಮುಪ್ಪಿನ ಅವಸ್ಥೆ ಎನ್ನಬಹುದು.

	ನದಿಗಳ ವಿಚಾರವಾಗೂ ಇದೇ ರೀತಿಯ ಹಂತಗಳನ್ನು ಗುರುತಿಸಬಹುದು. ಬೆಟ್ಟದ ಯಾವುದೋ ಸ್ಥಳದಲ್ಲಿ ಹುಟ್ಟುವ ನದಿ, ತನ್ನ ಬಾಲ್ಯ ಮತ್ತು ಯೌವನಾವಸ್ಥೆಯಲ್ಲಿ, ಬಂಡೆಯಿಂದ ಬಂಡೆಗೆ ನೆಗೆಯುತ್ತ, ಹಾರುತ್ತ, ದುಮ್ಮಿಕ್ಕುತ್ತ, ನಾನಾ ಬಗೆಯಲ್ಲಿ ವರ್ತಿಸುತ್ತ ವೇಗದಿಂದ ಕೆಳಗೆ ಹರಿದು ಬರುತ್ತದೆ. ಈ ಅವಸ್ಥೆಯಲ್ಲಿ ಅದರ ದಾರಿಯ ಅಡ್ಡ ಬಂದ ಎಲ್ಲವನ್ನು ತಳ್ಳಿ, ಇಲ್ಲವೆ ಸೀಳಿಕೊಂಡು ಹೋಗುತವುದೇ ಅದರ ಲಕ್ಷಣ. ಮುಂದೆ ಸಾಗಿದಂತೆ ನದಿಗೂ ವಯಸ್ಸಾಗುತ್ತದೆ. ಮೊದಲಿನ ಸಾಮಥ್ರ್ಯ ಇರದು. ನದಿಗೂ ಒಂದು ಬಗೆಯ ಗಾಂಭೀರ್ಯ ಬಂದಿರುತ್ತದೆ. ಮುಂದೆ ಸಾಗುತ್ತ ವೇಗ ಕಡಿಮೆಯಾಗಿ ಅದು ಮುಪ್ಪಿನ ಅವಸ್ಥೆ ಐದುತ್ತದೆ. ಹಿಂದೆ ಹೊತ್ತು ತಂದ ಮಣ್ಣನ್ನು ದಡದಲ್ಲಿ ಹರಡುವುದೊಂದೇ ಆಗಿನ ಅದರ ಕೆಲಸ. ಹೀಗೆ ಪಾತ್ರವನ್ನು ಅಗಲಮಾಡಿಕೊಂಡು ಮಂದಗತಿಯಿಂದ ಸಾಗುತ್ತ ಅಂತಿಮವಾಗಿ ಸಮುದ್ರ ಸೇರುತ್ತದೆ.

	ಸಮುದ್ರತಳದಲ್ಲಿ ನಿಕ್ಷೇಪಗೊಂಡ ಶಿಲೆಗಳು ಪದರ ಪದರವಾಗಿ, ಹಾಳೆಹಾಳೆಯಾಗಿ ಒಟ್ಟುಗೂಡುತ್ತವೆ. ಭೂಮಿಯಲ್ಲಿಯ ಅಂತರ್ಜನಿತಶಕ್ತಿಗಳ ದೆಸೆಯಿಂದ ಈ ಪದರಗಳು ಮಡಿಕೆಬಿದ್ದು ನೀರಿನ ಒಳಗಿನಿಂದ ಮೇಲೆ ಬಂದು ಪರ್ವತ ಪಂಕ್ತಿಯಾಗಿ ನಿಲ್ಲುವುದುಂಟು. ಮಡಿಕೆಬಿದ್ದಪದರಗಳಲ್ಲಿ, ಬೇರೆ ಬೇರೆ ಜಾತಿಯ ಶಿಲೆಗಳಿರುತ್ತವೆ. ಕೆಲವು ಪದರಗಳು ಜೇಡಿಯಂಥ ಮಣ್ಣಿನಿಂದ ಕೂಡಿರಬಹುದು. ಮತ್ತೆ ಕೆಲವು ಮರಳುಗಲ್ಲಿನಂತೆ ಗಡುಸಾದ ಪದರಗಳಾಗಿರಬಹುದು. ಕಬ್ಬಿಣ ಅಂಶವೇ ಹೆಚ್ಚಾಗಿ ಸೇರಿಕೊಳ್ಳುವ ಕಾರಣ ಕಬ್ಬಿಣಶಿಲೆಯಾಗಿರಬಹುದು. ಮಡಿಕೆಬಿದ್ದು ಎದ್ದುನಿಂತ ಪದರಗಳು ಭೂಮಿಯ ಮೇಲಿನ ಶಕ್ತಿಗಳಿಗೆ ಸಿಕ್ಕಿ ಕ್ಷಯಿಸುತ್ತವೆ. ಜೇಡಿಮಣ್ಣಿನಿಂದ ಕೂಡಿದ ಮೆತು ಕಲ್ಲು ಮೊದಲು ಶಿಥಿಲಗೊಳ್ಳುತ್ತದೆ. ಮತ್ತು ಕೊಚ್ಚಿಹೋಗುತ್ತದೆ. ಗಡುಸಾದ ಶಿಲಾಪದರಗಳು ಎಮ್ಮೆಯ ಬೆನ್ನೇಣಿನಂತೆ ಎದ್ದು ನಿಂತಿರುತ್ತವೆ. ನಮ್ಮ ರಾಜ್ಯದ ಕುದುರೆ ಮುಖ, ಬಾಬಾಬುಡನ್, ಕೊಡಚಾದ್ರಿ ಪರ್ವತದ ಸಾಲುಗಳಲ್ಲಿ ಈ ರೀತಿಯ ಗುಡ್ಡ ಸಾಲುಗಳನ್ನು ಕಾಣಬಹುದು.

	ಬಟ್ಟಬಯಲು ಆಗಿರುವ ಪ್ರದೇಶದಲ್ಲಿ ಥಟ್ಟನೆ, ಗೋಳಗುಮ್ಮಟದಂತೆ ಎದ್ದು ನಿಂತಿರುವ ಬೃಹದಾಕಾರದ ಬಂಡೆಗಳನ್ನು ಕೋಲಾರ, ಬೆಂಗಳೂರು, ತುಮಕೂರು, ಬಳ್ಳಾರಿ, ರಾಯಚೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕಾಣಬಹುದು. ಕಡಿದಾದ ಪಕ್ಕಗಳು ಪೇರಿಸಿಟ್ಟಂತೆ ಇರುವ ಕಲ್ಲುಗುಂಡಿನ ರಾಶಿಗಳು ಇವುಗಳ ಮುಖ್ಯ ಲಕ್ಷಣ. ಇಂಥ ಗುಡ್ಡಗಳ ಮೇಲೆ ಏರಿ ಹೋಗುವುದು ಕಷ್ಟಸಾಧ್ಯವಾದುದರಿಂದ, ಇಂಥಲ್ಲಿ ಹಿಂದಿನ ರಾಜರುಗಳು ದುರ್ಗಗಳನ್ನು ನಿರ್ಮಿಸುತ್ತಿದ್ದರು. ಯಾವ ಬಗೆಯ ಕಲ್ಲಾದರೂ ಈ ರೀತಿ ಗೋಳಗುಮ್ಮಟದಂತೆ ನಿಲ್ಲಬಲ್ಲದು. ವಿಶಾಲವಾಗಿ ಹರಡಿರುವ ಕರಿಯ ಮಣ್ಣಿನ, ಬೋಳುಬಯಲಿನ ನಡುವೆ ನರಗುಂದ, ನವಿಲುಗುಂದದ ಬೆಟ್ಟಗಳು ಕಾಣಿಸುತ್ತವೆ. ಇವು ಮರುಗಲ್ಲಿನಿಂದಾದವು. ಸಾಮಾನ್ಯವಾಗಿ ಇಂಥ ಗುಡ್ಡಗಳೆಲ್ಲ ಗ್ರ್ಯಾನೈಟ್ (ಸುಟ್ಟಕಲ್ಲು) ಶಿಲೆಗಳಿಂದ ಉಂಟಾದವು. ಶಿವಗಂಗೆ, ಸಾವನದುರ್ಗ, ಮಧುಗಿರಿ, ಪಾವಗಡ, ಮಿಡಿಗೇಶಿ, ಚಾಮುಂಡಿಬೆಟ್ಟ ಇವು ಉದಾಹರಣೆಗಳು. ಇಲ್ಲಿಯ ಬಂಡೆಗಳು ರಾಶಿರಾಶಿಯಾಗಿ ಪೇರಿಸಿಟ್ಟಂತೆ ಇರುತ್ತವೆ. ಇನ್ನು ಕೆಲವೆಡೆಯ ಬಂಡೆಗಳು ಕೆಳಗುರುಳದೇ ಮೇಲೆಯೇ ಒಂದರ ಪಕ್ಕದಲ್ಲೊಂದು ಕುಳಿತು ಕೋಟೆ ಆಕಾರದಲ್ಲಿರುತ್ತವೆ. ಈ ಆಕಾರ ಬರಲು ಗ್ರ್ಯಾನೈಟ್ ಕಲ್ಲಿನಲ್ಲಿಯ ಚಚ್ಚೌಕ ಸೀಳುಗಳೇ ಕಾರಣ. ಇವುಗಳ ದೆಸೆಯಿಂದ ವಿಶಾಲವಾದ ಬಂಡೆ ಸೀಳುಬಿಟ್ಟು ಕಲ್ಲುಗುಂಡುಗಳಾಗಿ ಒಡೆದುಹೋಗುತ್ತದೆ. ಒಡೆದು ಬೇರೆಯಾದ ಗುಂಡುಗಳು ಕೆಳಗುರುಳಿ ಮತ್ತೂ ದುಂಡನೆಯ ಆಕಾರಹೊಂದಿ ಬೆಟ್ಟದ ತಪ್ಪಲಿನಲ್ಲಿ ರಾಶಿಗೂಡುತ್ತವೆ.

	ಎದ್ದು ನಿಂತಿರುವ ಪೀಠಭೂಮಿ ನದಿಯ ಶಿಲ್ಪಕಾರ್ಯಕ್ಕೆ ಈಡಾದಾಗ ಹರಿಯುವ ನೀರು ಕಲ್ಲನ್ನು ಕೊರೆದು ತನ್ನ ಪಾತ್ರವನ್ನು ಕೆಳಗಿಳಿಸಿಕೊಳ್ಳುತ್ತದೆ. ಕೊರೆದುಹೋದ ಪ್ರದೇಶ ಕಣಿವೆಯಂತೆಯೂ ಕೊರೆದು ಹೋಗದೆ ಎದ್ದು ನಿಂತ ಪ್ರದೇಶ ಗುಡ್ಡದಂತೆಯೂ ಕಾಣಿಸುತ್ತವೆ. ಕೊರೆದ ಕಲ್ಲು ಬಲು ಗಡುಸಾಗಿರುತ್ತದೆ. ಕೊರೆದು ಹಾಕಿದ ಕಣಿವೆಯ ಪಕ್ಕಗಳು ಬಲು ಕಡಿದಾಗಿದ್ದು ಗೋಡೆಯಂತೆ ನಿಂತಿರುತ್ತವೆ. ಇಂಥ ಕಡಿದಾದ ಕಣಿವೆಗಳಿಗೆ ಕಂದರಗಳು ಎಂದು ಹೆಸರು. ಉದಾಹರಣೆಗೆ ಕರ್ನಾಟಕದ ಜೋಗದ ಬಳಿ ಶರಾವತಿ ತನ್ನ ಶಕ್ತಿಯಿಂದ ಗಡಸು ಶಿಲೆಯಲ್ಲಿ ಸುಮಾರು 30ಕಿಮೀ ದೂರದವರೆಗೂ ಕಂದರ ಕೊರೆದಿದೆ.

	ಸಾಮಾನ್ಯವಾಗಿ ಕಣಿವೆಗಳೆಲ್ಲ ಇಂಗ್ಲಿಷಿನ ಗಿ ಅಕ್ಷರದ ಆಕಾರದಲ್ಲಿರುತ್ತವೆ. ನದಿ, ಬೆಟ್ಟಗಳ ವಿವಿಧ ಪ್ರಾವಸ್ಥೆಗಳನ್ನು ಹೇಗೆ ಗುರುತಿಸಬಹುದೋ ಹಾಗೆಯೆ ಕಣಿವೆಗಳ ಆಕಾರ ಗಮನಿಸಿ ಅವು ಯಾವ ಅವಸ್ಥೆಯಲ್ಲಿವೆ ಎಂಬುದನ್ನು ತಿಳಿಯಬಹುದು. ಇದೇ ರೀತಿ ಗುಡ್ಡ ಪ್ರದೇಶದ ವಿವಿಧ ಪ್ರಾವಸ್ಥೆಗಳನ್ನು ಗುರುತಿಸಿ ಅದರ ಪ್ರಸಕ್ತ ಸ್ಥಿತಿಯನ್ನು ಅರಿಯುವುದು ಸಾಧ್ಯವಾಗಿದೆ.

	ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ಬಗೆಬಗೆಯ ಕಂದರಗಳೂ ಕಮರಿಗಳೂ ನಿರ್ಝರಿಗಳೂ ಜಲಪಾತಗಳೂ ಕಾಣಬರುತ್ತವೆ. ಮಲೆನಾಡು ಪ್ರದೇಶವನ್ನು ಬಿಟ್ಟು ಮುಂದೆ ಸಾಗಿಬಂದರೆ ಪ್ರಕೃತಿರೂಪಗಳು ಬದಲಾಗುವುದನ್ನು ಕಾಣಬಹುದು. ಚೂಪಾಗಿರುವಂಥದೂ ಕಡಿದಾದುದೂ ಆದ ಗಿರಿಶೃಂಗಗಳು, ಎಮ್ಮೆಯ ಬೆನ್ನೇಣಿನಂತೆ ಹಬ್ಬಿರುವ ಪರ್ವತ ಪಂಕ್ತಿಗಳೂ ಹಿಂದೆ ಸರಿದು ನುಣ್ಣನೆಯ ಬೋಳು ಗುಡ್ಡಗಳು ಕಾಣಿಸುತ್ತವೆ. ಅಲ್ಲೊಂದು ಇಲ್ಲೊಂದು ಇರುವ ಹಾಗೆ ಕೋನಾಕಾರದ ಕೆಲವು ಗಿರಿಗಳು ತಲೆಯೆತ್ತಿ ನಿಂತಿರುತ್ತವೆ.
(ಬಿ.ಪಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ